Wednesday, March 31, 2010

ಚಂದ್ರಖಾನಿ ಏರಿಳಿದಾಗ

ಚಂದ್ರಖಾನಿ ಏರಿಳಿದಾಗ
ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ ಸಂಸ್ಥೆಯ ಆಶ್ರಯದಲ್ಲಿ ನಡೆಸುವ ಹಿಮಾಚಲ ಪ್ರದೇಶದ “ಚಂದ್ರಖಾನಿ ಪಾಸ್” ಚಾರಣದ (TREKKING) ಭಾಗವಹಿಸಿ ಒಂದು ಅಪೂರ್ವ ಅನುಭವವನ್ನು ಈ ಚಾರಣದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ 42 ಸದಸ್ಯರೊಂದಿಗೆ ಬೆರೆತು ಭಾಷೆಯ ವ್ಯಾಮೋಹ, ಧರ್ಮದ ದುರಭಿಮಾನ ಮರೆತು, ಒಂದೇ ಕುಟುಂಬದ (ಭಾರತ ಮಾತೆಯ) ಮಕ್ಕಳಂತೆ ಮರಿಗಳಂತೆ ಕೂಡಿ ಓಡಾಡಿದ 13 ದಿನದ (ದಿನಚರಿ) ಬದುಕು ಚಿರಸ್ಮರಣೀಯ. ಚಂದ್ರಖಾನಿ ಪಾಸ್ ಒಂದು ಗೋಲಾಕಾರದ ಹಿಮಚ್ವಾದಿತ ಪರ್ವತವಾಗಿದ್ದು 12000 ಅಡಿಗಳ ಎತ್ತರದಲ್ಲಿದೆ. ಅಲ್ಲಿಗೆ ತಲುಪಬೇಕಾದರೆ ಸುಮಾರು 150 ಕಿ.ಮಿ. ಅಂತರವನ್ನು ಕಾಲ್ನಡಿಗೆಯಿಂದ ನದಿಕಾಲುವೆ ದಾಟುತ್ತ ಗುಡ್ಡಬೆಟ್ಟ ಏರುತ್ತಾ, ಪ್ರಪಾತವನ್ನು ಜಿಗಿಯುತ್ತ ಹಿಮದ ಮೇಲೆ ಜಾರುತ್ತ, ಸಾಗುವುದು ನಮ್ಮಂತಹ ಸಾಮಾನ್ಯರಿಗೊಂದು ಅದ್ದೂರಿಯ ಸಾಹಸವೆ ಸರಿ. ಇಷ್ಟು ದೂರವನ್ನು ಒಂದೆರಡು ದಿನದಲ್ಲಿ ಕ್ರಮಿಸುವುದು ಅಸಾದ್ಯ ಅದಕ್ಕಾಗಿಯೇ ಈ ಅಂತರ ತಲುಪುವ ಮಧ್ಯದಲ್ಲಿ ಜಾನಾ, ಮತ್ತಿಕೋಚಾರ‍್, ಝರಿ, ಕಸೋಲ್, ರಶೋಲ್, ಮಲಾನಾ, ಕಿಕ್ಸಾಧ್ಯಾಚ್, ನಾಗರೋಣಿ ಮುಂತಾದ ಶಿಬಿರಗಳಲ್ಲಿ ತಂಗಿ ಹದಿಮೂರು ದಿನ ಚಾರಣ ಮಾಡಬೇಕಾಗುತ್ತದೆ. ಪ್ರತಿಯೊಂದು ಶಿಬಿರದಲ್ಲಿಯೂ ಒಂದೊಂದು ರಾತ್ರಿ ಕಳೆದು, ಕ್ರಮಿಸಿದ ಚಾರಣದ ಅನುಭವವನ್ನು ಮೆಲುಕು ಹಾಕಿ, ಮುಂದಿನ ಶಿಬಿರಕ್ಕೆ ತಲುಪಬೇಕಾದ ಹಾದಿಯಲ್ಲಿ ಹಸಿವನ್ನು ಹಿಂಗಿಸಿಕೊಳ್ಳಲು ಬುತ್ತಿಗಂಟು (LUNCH PACK) ಹಿಡಿದುಕೊಂಡು, ಕಡಿದಾದ ಕಣಿವೆಯಲ್ಲಿ ಹಾಗೂ ಮಂಜಿನ ಮೇಲೆ ನಡೆಯಲು ಊರು ಗೋಲು ತೆಗೆದುಕೊಂಡು ಪ್ರಯಾಣಿಸುವುದು ಒಂದು ರೀತಿಯ ಚಾರಣ ಸಿದ್ಧಾಂತವಾಗಿದೆ.

ಚಂದ್ರಖಾನಿಯನ್ನು ಏರುವುದೇ ಚಾರಣದ ಮುಖ್ಯ ಉದ್ದೇಶವಲ್ಲ. ಈ ಮಧ್ಯದಲ್ಲಿ ಕಂಡ ಸೃಷ್ಟಿಯ ಸೊಬಗು ಜನಜೀವನದ ವೈಖರಿ, ಚಾರಣಗರಿಗೆ ವಿಶೇಷ ಜ್ಞಾನವನ್ನು ಕೊಡುವುದರ ಜೊತೆಗೆ, ಬೇರೊಂದು ಪ್ರಪಂಚದಲ್ಲಿ ವಿಹರಿಸಿದ ಅನುಭವ, ಬದುಕಿನಲ್ಲಿ ಕಾಣದಿದ್ದುದೇನನ್ನೋ ಕಂಡ ಖುಷಿ ಜೊತೆಗೆ ಬೇರೆ ಬೇರೆ ರಾಜ್ಯದ ಬೇರೆ ಬೇರೆ ಭಾಷೆಯ ಚಾರಣಗರೊಂದಿಗೆ ಭಾತೃತ್ವ ಸಂಬಂ
ಧಗಳಿಸಿದ ತೃಪ್ತಿ ಲಭಿಸುತ್ತದೆ. ಅಲ್ಲಲ್ಲಿ ಸಿಗುವ ಹಿಮನದಿಯ ಗಂಭೀರ ಓಟ, ಸೀರೆ ಇಳಿಬಿಟ್ಟಂತೆ ದುಮ್ಮಿಕ್ಕುವ ಜಲಪಾತ ಮುಗಿಲಿಗೆ ಮುತ್ತನೀಯುವ ಪೈನ್ ಮರಗಳ ಸಾಲು ದಟ್ಟವಾದ ಕಾಡು, ದೂರದಲ್ಲಿ ಕಾಣುವ ಅಲಿರತ್ನ, ಮತ್ತು ಇಂದ್ರಾಸನ್ ದಂತಹ ಗಗನಚುಂಬಿ ಶಿಖರಗಳು, (19000 ಅಡಿ ಎತ್ತರ) ಹದಮಾಡಲು ಹರಿದಿಟ್ಟ ಹತ್ತಿಯಂತೆ ಕಾಣುವ ಹಿಮಚ್ವಾಧಿತ ನೆಲ, ಅಲ್ಲಲ್ಲಿ ಮರಕಡಿದು ಸಾಗುವಳಿಗೆ ಉಪಯೋಗಿಸಿದ ಹೊಲ, ನೀರಿನ ಮೇಲೆ ತೇಲಾಡುವ ಬೃಹದಾಕಾರದ ಮಂಜುಗಡ್ಡೆ ಹಿಮದ ಗುಹೆ, ಪ್ರಸಿದ್ದ ಕ್ರಿಕೆಟ್ ಮೈದಾನದಂತೆ ಕಾಣುವ ಹಸಿರು ಹುಲ್ಲಿನ ಮೈದಾನ, ಅಲ್ಲಲ್ಲಿ ವಾಸಿಸುವ ಜನ ಹಾಗೂ ಅವರ ಉಡುಗೆ ತೊಡುಗೆ ಮತ್ತು ಆಚಾರ ವಿಚಾರಗಳು ಎಂತಹ ಅರಸಿಕರಿಗೂ ಸಹ ರಸಿಕತನದ ಗಂಧಲೇಪಿಸಿ ಅಲ್ಲಿದ್ದಷ್ಟು ಕಾಲ ಕವಿಯಾಗಿ, ವಿಜ್ಞಾನಿಯಾಗಿ, ವಿಮರ್ಶಕನಾಗಿ, ಯಾತ್ರಿಕನಾಗಿ, ಭಾವುಕರನ್ನಾಗಿ ಮಾಡುತ್ತದೆ. ಹಲವು ಬಂಧನಕ್ಕೊಳಪಟ್ಟು ಬಲ್ಲಿದರೂ ಎಂಬ ಬಿಗುಮಾನವನ್ನು ಬದಿಗೊತ್ತಿ ಏನೂ ಅರಿಯದೆ ಹಸುಳೆಯ ತೆರದಲ್ಲಿ ಉರುಳಾಡಿ ಪ್ರಕೃತಿ ಮಾತೆಯ ಒಡಲನ್ನು ಚುಂಬಿಸಿ ಆರಾಧಿಸಬೇಕೆನಿಸುತ್ತದೆ.

ಚಂದ್ರಖಾನಿ ತಲುಪುವಲ್ಲಿ ಸಿಗುವ ಪ್ರತಿಯೊಂದು ಸ್ಥಳವೂ ಒಂದಿಲ್ಲೊಂದು ರೀತಿಯಿಂದ ವಿಶೇಷವಾಗಿದ್ದ
ರೂ ಇವುಗಳಲ್ಲಿ “ಮತ್ತಿಕೋಚಾರ್ ‍”ದ ವಿಷಯವೇ ಬೇರೆ. ಮತ್ತಿಕೋಚಾರ್ ಸೊಬಗಿಗೆ ಇನ್ನೊಂದು ಹೆಸರು ಎಂದರೆ ತಪ್ಪಾಗಲಾರದು. ಪುರಾಣದಲ್ಲಿ ಓದಿದ ಸ್ವರ್ಗಲೋಕ, ಭೂಲೋಕ, ಪಾತಾಳಲೋಕ ಎಂದು ಅದು ಕಾಲ್ಪನಿಕವೇ ಆಗಿದ್ದರೂ ಅದನ್ನು ಬರೆದಂತಹ ಕವಿ ಬರೆಯುವ ಮುನ್ನ ಈ ಸ್ಥಳಕ್ಕೆ ಬಂದು ದರ್ಶಿಸಿದ ಪ್ರೇರಣಿಯಿಂದಲೇ ಬರೆದಿರಬೇಕು ಎಂದು ಭಾಸವಾಗುವುದು ನಿಜವಾದ ತಾರೆಗಳಿಂದ ತುಂಬಿದ ಬಾನು ಮೇಲಿದ್ದರೆ ಸುಮಾರು ಐದಾರು ಕಿ.ಮೀ. ಆಳದಲ್ಲಿ ವಿದ್ಯುದ್ದೀಪದಿಂದ ಮಿನುಗುವ ಕುಲ್ಲುನಗರ ಇನ್ನೊಂದೆಡೆ. ಇವುಗಳ ಮಧ್ಯದಲ್ಲಿ ಮತ್ತೀಕೋಚಾರ‍್. ಈ ಅಂದದಿಂದಲೇ ರಾತ್ರಿಯ ವೇಳೆ ಇದನ್ನು “ಎರಡು ಅಂಬರ್” ಎಂದು ಕರೆಯುವುದು ಅಷ್ಟೇನೂ ಕಾಲ್ಪನಿಕ ಎನಿಸುವುದಿಲ್ಲ.


ಈ ಚಾರಣದಲ್ಲಿ ಗಮನ ಸೆಳೆಯುವ ಇನ್ನೊಂದು ಪ್ರದೇಶ “ಮಣಿಕರಣ್”ಇದು ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಕೇಂದ್ರ ಹಾಗೂ ಹಿಂದೂ ಸಿಖ್ ಮತಗಳ ಸಂಗಮ, ಗುರುದ್ವಾರ, ಶಿವಾಲಯ ಮತ್ತು ರಾಮಮಂದಿರದ ಅರ್ಚಕರು ಯಾವುದೇ ಮತಭೇದವಿಲ್ಲದೆ ಬಂದವರನ್ನು ಆದರಿಸಿ ಪ್ರಸಾದ ನೀಡುವ ಸೌಜನ್ಯತೆ ಸಮನ್ವಯ ಮೆಚ್ಚುವಂತಹದು, ಮಣಿಕರಣದಲ್ಲಿಯೇ ವಿಸ್ಮಯಕರ ಬಿಸಿನೀರಿನ ಬುಗ್ಗೆಯಿದೆ, ಮೈಕೊರೆಯುವಷ್ಟು ತಣ್ಣನೆಯ ಕೊಳದ ಪಕ್ಕದಲ್ಲಿಯೇ ಕೇವಲ ಹದಿನೈದು ನಿಮಿಷದಲ್ಲಿ ಅಡಿಗೆ ಮಾಡುವಷ್ಟು ಬಿಸಿಯಾದ ನೀರು ಭೂಮಿಯ ಬಿಸಿಯಿಂದ ಜಿಗಿಯುತ್ತದೆ ಎಂದರೆ ಇದೊಂದು ಆಶ್ಚರ್ಯವೋ ಅಥವಾ ಪವಾಡವೋ....? ಹಾಂ, ಇದಕ್ಕೆ ಒಂದು ದಂತಕಥೆಯೂ ಇದೆ. ಓಮ್ಮೆ ಪರಮೇಶ್ವರನು ತನ್ನ ಮಡದಿಯಾದ ಪಾರ್ವತಿ ದೇವಿಯೊಂದಿಗೆ ಈ ಯಾಗಿರಿಪಂಕ್ತಿಯಲ್ಲಿ ವಿಹರಿಸುತ್ತಿದ್ದಾಗ ಪಾರ್ವತಿ ದೇವಿಯ ಕಿವಿಯನ್ನು ಅಲಂಕರಿಸಿದ ಅಪೂರ್ವ ಮಣಿಯೊಂದು ಆಕಸ್ಮಿಕವಾಗಿ ಇಲ್ಲೆಲ್ಲೋ ಕಳೆದು ಹೋಯಿತಂತೆ. ಪಾರ್ವತಿದೇವಿಯ ಅಭಿಲಾಷೆಯಂತೆ ಆ ಮಣಿಯನ್ನು ಹುಡುಕಲು ಪರಮೇಶ್ವರನೇ ತನ್ನ ಗಣವನ್ನು ಕಳುಹಿಸುತ್ತಾನಂತೆ. ಆದರೆ ಇಷ್ಟು ಹುಡುಕಿದರೂ ಮಣಿಯು ಸಿಗದಿದ್ದಾಗ ಕೋಪಿಷ್ಟನಾದ ಪರಮೇಶ್ವರನು ಈ ಜಾಗದಲ್ಲಿ ಬಿರುಸಿನಿಂದ ಊದಿದನಂತೆ ತಕ್ಷಣ ಪರಮೇಶ್ವರನ ಕೋಪದ ಪ್ರತೀಕವಾಗಿ ಇಲ್ಲಿಂದ ಬಿಸಿನೀರಿನ ಬುಗ್ಗೆ ಚಿಮ್ಮಿತಂತೆ. ಇದೊಂದು ದಂತ ಕಥೆಯಾಗಿರಲಿ ಅಥವಾ ಭೂವಿಜ್ಞಾನದ ಹಿನ್ನೆಲೆಯೇ ಇರಲಿ, ಮೇಲ್ನೋಟಕ್ಕಂತೂ ಇದೊಂದು ವಿಸ್ಮಯ ವಿಷಯವಾಗಿದ್ದು ಈಗಲೂ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಬಂದು ಬಿಸಿನೀರಿನಲ್ಲಿ ಮಿಂದು ಅದೇ ನೀರಿನಲ್ಲಿ ತಯಾರಿಸಿದ ಅನ್ನವನ್ನು ಪ್ರಸಾದವೆಂದು ಸ್ವೀಕರಿಸುವುದನ್ನು ಕಾಣಬಹುದು.ಈ ಚಾರಣದ ಸಮಯದಲ್ಲಿ ಜನಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚಿಗೆ ಗಮನ ಸೆಳೆಯುವ ನಾಡು ಎಂದರೆ “ರಸೋಲ್”
ಮತ್ತು “ಮಲಾನಾ”. ಈ ಎರಡೂ ಸ್ಥಳದ ಜನರ ಆಚಾರವು ಒಂದೇ ಬಗೆಯ ಸಂಪ್ರದಾಯದ್ದಾಗಿದ್ದು ಒಂದು ರೀತಿಯ ಪ್ರತ್ಯೇಕತೆ ಇದ್ದ ಹಾಗೆ. ಸಾರ್ವಭೌಮನು ಯಾರ ಸಹಾಯ, ಸಹಕಾರವನ್ನು ಅಪೇಕ್ಷಿಸದ ಸ್ವಾಭಿಮಾನಿಗಳು ಈ ಹಳ್ಳಿಗರು ಹೆಚ್ಚೇಕೆ ಹಿಮಾಚಲ ಸರ್ಕಾರ ದೊರಕಿಸಿ ಕೊಟ್ಟ ವಿದ್ಯುತ್ ತಂತಿಯನ್ನು ಹರಿದು ಬಿಸಾಡಿದ ಭೂಪರು, ತಮಗೆ ನಾಡ ಜೌಷಧಿಯೇ ಸಾಕೆಂದು ಸರ್ಕಾರ ನಿರ್ಮಿಸಿದ ದವಾಖಾನೆಯ ಬಾಗಿಲನ್ನು ಸಹ ನೋಡದ ಅಭಿಮಾನಿಗಳು. ಇವರ ಸಂಪ್ರದಾಯವೇ ಇವರಿಗೆ ಕಾನೂನು. ಊರಿನ ಮುಖ್ಯಸ್ಥನೇ ಇಲ್ಲಿಯ ಪ್ರಧಾನಿ. ಊರಿನಲ್ಲಿಯ ತಕರಾರನ್ನು ಶಾಂತಪಡಿಸಲು ಪೋಲೀಸರ ಸಹಕಾರವಾಗಲೀ, ನ್ಯಾಯ ನಿರ್ಣಯಿಸಲು ನ್ಯಾಯಾಲಯದ ಅವಶ್ಯಕತೆಯಾಗಲೀ ಇವರಿಗೆ ಬೇಕಾಗಿಲ್ಲ. ಎಲ್ಲಾ ವಿಚಾರವನ್ನು ಊರ ಪಂಚರ ಸಭೆಯಲ್ಲಿ ತೀರ್ಮಾನಿಸಿಕೊಳ್ಳುವರು. ಇನ್ನು ಮದುವೆ ವಿಚಾರದಲ್ಲಿಯೂ ಅಷ್ಟೇ, ಗಂಡು ಹೆಣ್ಣುಗಳ ಸಂಬಂಧ ಆ ಊರಿಗೆ ಮಾತ್ರ ಸೀಮಿತವಾಗಿದೆ. ಇವರ ಆರಾಧ್ಯ ದೇವತೆ ರೇಣುಕಾದೇವಿ ಮತ್ತು ಜಮದಗ್ನಿ, ಈ ದೇವಾಲಯವನ್ನು ಈ ಹಳ್ಳಿಯವರಲ್ಲದೆ ಬೇರೆಯವರು ಸ್ಪರ್ಶಿಸುವಂತಿಲ್ಲ. ಹಾಗೇನಾದರೂ ಅಪ್ಪಿ ತಪ್ಪಿ ಮುಟ್ಟಿದರೂ ಯಾವ ಮುಲಾಜಿಲ್ಲದೆ ಐದುನೂರು ರೂಪಾಯಿ ದಂಡ ವಿಧಿಸುತ್ತಾರೆ. ಈ ದಂಡದಿಂದ ಬಂದ ಹಣದಲ್ಲಿ ಒಂದು ಕುರಿ ಅಥವಾ ಮೇಕೆಯನ್ನು ಖರೀದಿಸಿ ದೇವರಿಗೆ ಬಲಿಕೊಟ್ಟು ಪವಿತ್ರಗೊಳಿಸುತ್ತಾರೆ! ಈ ಊರಿನವರ ಹೊರತಾಗಿ ಬೇರೆ ಊರಿನವರು ಇಲ್ಲಿ ಅಸ್ಪೃಶ್ಯರು. ಇಷ್ಟೊಂದು ಸಂಪ್ರದಾಯಿಕ ಕಟ್ಟಳೆಯಲ್ಲಿಯೂ ಎಷ್ಟೊಂದು ಸಮೃದ್ಧವಾದ ಜೀವನ ಅವರದು. ಸುಖಪಡಬೇಕು ಎಂತಾದರೆ ನಾಗರೀಕತೆಯೇ ಬೇಕೆ? ಎಂಬುದಕ್ಕೆ ಒಂದು ಸವಾಲಿನಂತಿದೆ ಇಲ್ಲಿಯ ಜನಜೀವನ. ಚಾರಣದಲಿಯೇ ಅತ್ಯಂತ ಕಠಿಣವಾದ ನಡಿಗೆ ನಾಗರೋಣಿಯಿಂದ ಚಂದ್ರಖಾನಿ ತಲುಪುವುದು. ಸುಮಾರು ೨೦ ಕಿ.ಮಿ. ಅಂತರವನ್ನು ಕಡಿದಾದ ಪ್ರಪಾತ ದಾಟುತ್ತ ಇಕ್ಕಟ್ಟಾದ ಗುಡ್ಡ ಏರುತ್ತಾ, (ನೀರಿನ ಮೇಲೆ) ಆವರಿಸಿದ ಹಿಮದ ಮೇಲೆ (GLACIER) ನಡೆಯುತ್ತಾ ಹೋಗುವುದೆಂದರೆ ಎಂತಹ ಧೈರ್ಯವಂತನ ಎದೆಯೂ ಓಮ್ಮೆ ನಡುಗಲೇಬೇಕು. ಈ ದಾರಿಯಲ್ಲಿಯೇ “INSPECTOR PASS” ನೋಡಬಹುದು. ಅದೆಷ್ಟೋ ವರ್ಷಗಳ ಹಿಂದೆ ಒಬ್ಬ ಇನ್ಸ್ ಪೆಕ್ಟರ‍್ ಈ ದಾರಿಯಲ್ಲಿ ಚಾರಣ ಮಾಡುತ್ತಿದ್ದಾಗ ಆಯಾ ತಪ್ಪಿ ಜಾರಿಬಿದ್ದು ಸತ್ತಿದ್ದರಿಂದ ಇದನ್ನು “ಇನ್ಸ್ ಪೆಕ್ಟರ‍್ ಪಾಸ್” ಎಂದು ಕರೆಯಲಾಗುತ್ತಿದೆಯಂತೆ. ಇದು ಕೇವಲ ಅಂತೆಕಂತೆಯಲ್ಲ. ಅಷ್ಟೆ ಭಯಾನಕವೆಂಬುದು ಸತ್ಯ, ನಡೆಯುವಾಗ ಕೈಕಾಲು ಕಂಪಿಸಿಯೋ, ತಲೆಸುತ್ತು ಬಂದು ಉರುಳಿ ಬಿದ್ದರೆ ಮುಗಿಯಿತು. ಬಿದ್ದವನ ಹೆಸರಿನಲ್ಲಿ ಇನ್ನೊಂದು ಪಾಸ್ ಸೃಷ್ಟಿಯಾಗುವುದು ಗ್ಯಾರಂಟಿ, ಇದರ ಪಕ್ಕದಲ್ಲಿ ಸುಮಾರು 750 ಅಡಿಯಷ್ಟು ಆಳಕ್ಕೆ ಮಂಜಿನ ಮೇಲಿಂದ ಜಾರಿ ಮುಂದಕ್ಕೆ ಹೋಗಿ ಚಂದ್ರಖಾನಿ ಶಿಖರ ಏರಬೇಕು. ಚಂದ್ರಖಾನಿ ಶಿಖರ ಸಂಪೂರ್ಣ ಹಿಮದ ರಾಶಿ

ಈ ಶಿಖರವೇ ಚಾರಣದ ಅಂತಿಮ ಘಟ್ಟ (CLIMAX POINT) ಅಲ್ಲಿಂದ ಕೆಳಗಡೆ ನೋಡಿದರೆ ಯಾವುದೋ ಇಂಗ್ಲಿಷ್ ಸಿನೇಮಾದಲ್ಲಿ ಹೆಲಿಕಾಪ್ಟರ‍್ ಮೇಲಿಂದ ಚಿತ್ರೀಕರಿಸಿದ ದೃಶ್ಯ ನೋಡಿದ ಹಾಗಾಗುತ್ತದೆ. ಚಂದ್ರಖಾನಿಯಿಂದ ರುಮ್ಸುಗೆ ಬಂದು ಅಲ್ಲಿಂದ 5 ಕಿ.ಮಿ. ದೂರದಲ್ಲಿರುವ “ನಗರ‍್” ಪ್ರಸಿದ್ದ ರೋರಿಕ್ ಆರ್ಟ್ ಗ್ಯಾಲರಿ ನೋಡಿದರೆ ಚಾರಣಕ್ಕೆ ಮಂಗಳ (ಅಂತಿಮ) ಹಾಡಿದಂತೆ. ಅಲ್ಲಿಂದ ಬಸ್ಸಿನಲ್ಲಿ ಬೇಸ್ ಕ್ಯಾಂಪ್ ಗೆ ಬಂದು ಅಭಿನಂದನೆಗಳ ಸುರಿಮಳೆಯೊಂದಿಗೆ ಇಷ್ಟು ದಿನ ಮಾಡಿದ ಸಾಹಸದ ಕಾರ್ಯಕ್ಕೆ ಗಣ್ಯರಿಂದ ಪ್ರಶಸ್ತಿಪತ್ರ ಸ್ವೀಕರಿಸಿ ನಮ್ಮ ವಾಸಸ್ಥಳಕ್ಕೆ ತಲುಪಿಸುವ ಟ್ರೇನ್ ಏರಿದಾಗ ಬಹುಶಃ ಪ್ರಕೃತಿಗೂ ಒಡಲಿಗೂ ಇರುವ ಸಂಬಂಧದಿಂದಲೋ ಏನೋ ಕಣ್ಣು ಹನಿದುಂಬಿ ಬಂದು ಕೆನ್ನೆಯ ಮೇಲೆ ಇಳಿಯಲಾರಂಭಿಸುತ್ತದೆ.

ಆಹ್ ಆ ಕಳೆದ ಗಳಿಗೆಗಳು! ನೆನೆದಾಗ ಮತ್ತೆ ಮೈ ನವಿರೇಳುತ್ತದೆ.
No comments:

Post a Comment