ಮಾಗಡಿ ಶ್ರೀ ರಂಗನಾಥ
ಮಾಗಡಿ ಶ್ರೀ ರಂಗನಾಥ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ಪಟ್ಟಣ ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ಅಲ್ಲಿನ ತಿರುಮಲ ರಂಗನಾಥಸ್ವಾಮಿ ದೇವಾಲಯ ಪ್ರಸಿದ್ಧ ಪುಣ್ಯ ಕ್ಷೇತ್ರ. ಮಾಂಡವ್ಯ ಮಹರ್ಷಿಗಳ ತಪಸ್ಸಿಗೆ ಒಲಿದು ತಿರುಮಲದ ತಿಮ್ಮಪ್ಪ ಮಾಗಡಿಯಲ್ಲಿ ರಂಗನಾಥಸ್ವಾಮಿಯಾಗಿ ನೆಲೆ ನಿಂತನೆಂಬ ನಂಬಿಕೆ ಜನರಲ್ಲಿದೆ.
ಇದು ದೇಗುಲಗಳ ಸಮುಚ್ಚಯ. ಪಶ್ಚಿಮಾಭಿಮುಖವಾಗಿ ನಿಂತಿರುವ ಆರು ಅಡಿ ಎತ್ತರದ ರಂಗನಾಥಸ್ವಾಮಿ ವಿಗ್ರಹ ನೋಡಲು ನಯನ ಮನೋಹರವಾಗಿದೆ. ಗರ್ಭಗೃಹದ ಮೂಲ ವಿಗ್ರಹದ ಬಲಭಾಗದಲ್ಲಿ ಮಾಂಡವ್ಯ ಋಷಿಯ ವಿಗ್ರಹವಿದೆ.
ದೇವರಿಗೆ ಅಭಿಷೇಕ ಮಾಡಿದ ನೀರು ಸಾಲಿಗ್ರಾಮ ರೂಪದಲ್ಲಿರುವ ಶಿಲೆಯ ಮೇಲೆ ಬೀಳುತ್ತದೆ. ಬಲಭಾಗದಲ್ಲಿ ಲಕ್ಷ್ಮಿದೇವಿ ಮತ್ತು ಎಡಭಾಗದಲ್ಲಿ ರಂಗನಾಯಕಿ ಅಮ್ಮನವರ ಪ್ರತ್ಯೇಕ ದೇಗುಲಗಳ ಜೊತೆಗೆ ಮಲಗಿರುವ ರಂಗನಾಥ ಸ್ವಾಮಿ, ವೇಣುಗೋಪಾಲ ಸ್ವಾಮಿ, ಕಾಳಿಂಗ ಮರ್ದನ, ಬೆಳೆಯೋ ರಂಗನಾಥ ಸ್ವಾಮಿ, ಅನ್ನಪೂರ್ಣೇಶ್ವರಿ, ಸೂರ್ಯ ಶಿಲ್ಪ, ಆಂಜನೇಯಸ್ವಾಮಿ ಗರುಡ ದೇವರು ಹಾಗೂ ಆಳ್ವಾರರ ದೇವಸ್ಥಾನಗಳು ಇಲ್ಲಿವೆ. ಈ ದೇಗುಲವು ಪೂರ್ವ, ಪಶ್ಚಿಮ ಮಹಾದ್ವಾರಗಳನ್ನು ಹೊಂದಿದೆ.
ದೇವರ ದರ್ಶನಕ್ಕೆ ನಿತ್ಯ ನೂರಾರು ಜನರು ಬರುತ್ತಾರೆ. ಮುಂಜಾನೆಯಿಂದ ಸಂಜೆಯವರೆಗೆ ದರ್ಶನ ಹಾಗೂ ಪೂಜೆಗೆ ಅವಕಾಶವಿದೆ. ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಬೃಹತ್ ದನಗಳ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಮತ್ತು ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ರಾಸುಗಳನ್ನು ಕೊಳ್ಳುವವರು, ಮಾರುವವರು ಆಗಮಿಸುತ್ತಾರೆ. ಎಂಟು ದಿನಗಳ ಕಾಲ ರಾಸುಗಳ ಜಾತ್ರೆ ನಡೆಯುತ್ತದೆ. ಚೈತ್ರಶುದ್ಧ ತ್ರಯೋದಶಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ.
ಈ ದೇವಸ್ಥಾನವನ್ನು ಚೋಳರ ದೊರೆ ರಾಜೇಂದ್ರ ಚೋಳ ಕ್ರಿ.ಶ.1039ರಲ್ಲಿ ನಿರ್ಮಿಸಿದನೆಂದೂ ವಿಜಯನಗರದ ಕೃಷ್ಣದೇವರಾಯರು ರಂಗನಾಥಸ್ವಾಮಿಗೆ ಚಿನ್ನದ ಕಿರೀಟ, ಕುದುರೆ ಕೋಟು ಮಾಡಿಸಿಕೊಟ್ಟ ಎಂಬ ವಿವರಗಳು ದೇವಸ್ಥಾನದ ಮುಂದಿನ ಶಾಸನದಲ್ಲಿದೆ.
ಮೈಸೂರು ಅರಸರು ಮತ್ತು ಟಿಪ್ಪುಸುಲ್ತಾನ್ ಹಾಗೂ ಬಿಜಾಪುರದ ಸುಲ್ತಾನರು ಈ ದೇವಸ್ಥಾನಕ್ಕೆ ದಾನ ಹಾಗೂ ದತ್ತಿಗಳನ್ನು ನೀಡಿ ಕಾಲಕಾಲಕ್ಕೆ ಅಭಿವೃದ್ಧಿ ಪಡಿಸಿದ್ದಾರೆ.
ಗರ್ಭಗೃಹದ ಹಿಂಬದಿಯಲ್ಲಿ ಬೆಳೆಯುವ ರಂಗಪ್ಪ ಎಂದೇ ಕರೆಯಲ್ಪಡುವ ವಿಗ್ರಹವಿದೆ.ಸಂತಾನ ಪ್ರಾಪ್ತಿಗಾಗಿ ಭಕ್ತರು ಇಲ್ಲಿ ತೊಟ್ಟಿಲು ಸೇವೆ ಹರಕೆ ಕಟ್ಟಿಕೊಳ್ಳುತ್ತಾರೆ. ರಂಗನಾಥಸ್ವಾಮಿಗೆ ಮಕ್ಕಳ ರಂಗ, ಮಾಗಡಿ ರಂಗ, ಅನ್ನದ ರಂಗ ಮೊದಲಾದ ಅಭಿದಾನಗಳಿವೆ.
ಮಾಗಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬೆಂಗಳೂರು, ತಾವರೆಕೆರೆ, ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ಮತ್ತು ಕುಣಿಗಲ್, ತಾಳೇಕೆರೆ, ಕೈಮರ ಹಾಗೂ ದಾಬಸ್‌ಪೇಟೆ, ಶಿವಗಂಗೆ, ಗುಡೇಮಾರನಹಳ್ಳಿಗಳ ಬರಲು ನೇರ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸೌಕರ್ಯವಿದೆ.
ದೇವಸ್ಥಾನದ ಆಡಳಿತ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೆಚ್ಚಿನ ಮಾಹಿತಿಗೆ ದೇವಳದ ಅರ್ಚಕ ಕೃಷ್ಣ ಅಯ್ಯಂಗಾರ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 9448018702.
ದೊಡ್ಡಬಾಣಗೆರೆ ಮಾರಣ್ಣ
No comments:
Post a Comment